Welcome, Guest   [ Register | Sign In | Take a tour | Adult Filter: On ]

ಏನು ಚೆನ್ನೈನಲ್ಲಿ 'ಮುಂಗಾರು ಮಳೆ'ಯೇ?

ಕರ್ನಾಟಕದೆಲ್ಲೆಡೆ ಕಳೆದ 200 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಯೋಗರಾಜ್ ಭಟ್‌ರ 'ಮುಂಗಾರು ಮಳೆ' ಈಗ ಅತೀ ವಿರಳವೆಂಬಂತೆ ದೇಶದ ಮಹಾನಗರಗಳಲ್ಲಿ ಒಂದಾದ ರಣ ಬಿಸಿಲಿನ ನಗರ ಚೆನ್ನೈಗೂ ಆಗಮಿಸಿ, ಎಲ್ಲಾ ಚಿತ್ರ ರಸಿಕರ, ವಿಶೇಷವಾಗಿ ಕನ್ನಡಿಗರ ಮೈ ಮನಗಳನ್ನು ತಣಿಸಿದೆ.

ಚೆನ್ನೈನ ಕ್ಯಾಸಿನೊ ಚಿತ್ರಮಂದಿರಕ್ಕೆ ಆಗಮಿಸಿರುವ ಗಣೇಶ್, ಸಂಜನಾ ಗಾಂಧಿ, ಅನಂತನಾಗ್ ಮುಂತಾದವರು ಪ್ರಮುಖ ಭೂಮಿಕೆಯಲ್ಲಿರುವ 'ಮುಂಗಾರು ಮಳೆ', ಕಳೆದ ಡಿಸೆಂಬರ್‌ನಲ್ಲಿ ಕರ್ನಾಟಕ ರಾಜ್ಯಾದ್ಯಂತ ತೆರೆ ಕಂಡು, ನಿರ್ದೇಶಕ ಯೋಗರಾಜ್ ಭಟ್‌ರ ಸರಳ ನಿರೂಪಣೆ, ಸಂಭಾಷಣೆ, ಗಣೇಶನ ಮುಗ್ಧ ತುಂಟ ಅಭಿನಯ, ದೇವದಾಸನ ಬಳೆ ಸದ್ದು ಒಳಗೊಂಡಂತೆ ಚಿತ್ರದ ಎಲ್ಲಾ ಕಲಾವಿದರ ಉತ್ತಮ ಅಭಿನಯ, ಕೃಷ್ಣರ ಮನೋಹರ ಛಾಯಾಗ್ರಹಣ, ಮನೋಮೂರ್ತಿಯವರ ಅತ್ಯಂತ ಮಧುರವಾದ ಸಂಗೀತ ಸಂಯೋಜನೆ, ಜಯಂತ ಕಾಯ್ಕಣಿಯವರ ನವನವೀನ ಸಾಹಿತ್ಯದಿಂದಾಗಿ ಆಶ್ಚರ್ಯಕರ ರೀತಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಚಿತ್ರರಸಿಕರನ್ನು ಆಕರ್ಷಿಸುತ್ತ, 50ರಿಂದ 100, 100ರಿಂದ 150. 150ರಿಂದ 200 ಹೀಗೆ ಅವಿರತವಾಗಿ ತನ್ನ ಪ್ರೀತಿಯ ಮಳೆಯನ್ನು ಸುರಿಸುತ್ತಲೇ ಇದ್ದು, ರಾಜ್ಯದೆಲ್ಲೆಡೆ ಗಲ್ಲಾಪೆಟ್ಟಿಗೆಯ ಎಲ್ಲಾ ಕೆರೆ ಕಟ್ಟೆಗಳು, ಹಳ್ಳ ಕೊಳ್ಳಗಳು, ನದಿ ಅಣೆಕಟ್ಟುಗಳು ತುಂಬಿ ಜನ ಪ್ರವಾಹ ಹರಿಯುವಂತೆ ಮಾಡಿದೆ.

ಕರ್ನಾಟಕದಂತೆ ಬಹುಪಾಲು ಚಿತ್ರಮಂದಿರಗಳಲ್ಲಿ ಇತರ ಭಾಷೆಗಳ ಚಿತ್ರಗಳು ಸ್ಥಳೀಯ ಭಾಷೆಯ ಚಿತ್ರಗಳೊಂದಿಗೆ ಪೈಪೋಟಿ ನಡೆಸದ ಚೆನ್ನೈನಲ್ಲಿ ಕನ್ನಡ ಭಾಷೆಯ ಚಿತ್ರ ತೆರೆ ಕಾಣುವುದು ಕುಂಭಮೇಳ, ಪಂಚಲಿಂಗದರ್ಶನ ನಡೆಯುವ ಹಾಗೆ ನಾಲ್ಕು ವರ್ಷ ಆರು ವರ್ಷಗಳಿಗೊಮ್ಮೆ ಎನ್ನಬಹುದು. ಅಂತಹದರಲ್ಲಿ ಮುಂಗಾರು ಮಳೆ ಇಲ್ಲಿ ತೆರೆ ಕಂಡಿರುವುದು ಇಲ್ಲಿನ ಕನ್ನಡಿಗರ ಪಾಲಿಗೆ ಸೌಭಾಗ್ಯವೇ ಸರಿ.

ಈಗಾಗಲೇ ಕರ್ನಾಟಕದಲ್ಲಿ ತೆರೆ ಕಂಡು 200 ದಿನಗಳನ್ನು ಪೂರೈಸಿರುವುದರಿಂದ ಹೆಚ್ಚು ಕಮ್ಮಿ ಇಲ್ಲಿನ ಎಲ್ಲಾ ಕನ್ನಡಿಗರು ತಮ್ಮ ತಾಯ್ನಾಡಿಗೆ ತೆರಳಿದಾಗಲೇ ನೋಡಿರುತ್ತಾರಾದರೂ, ತನ್ನದಲ್ಲದ ನಾಡಿನಲ್ಲಿ ತನ್ನ ತಾಯಿಭಾಷೆಯ ಚಿತ್ರ ನೋಡುವುದಕ್ಕಾಗಿ, ತನ್ನ ನಾಡಿನ ಜನರು ಎಷ್ಟು ಮಂದಿ ಇರಬಹುದು ಎಂಬುದನ್ನು ಕಾಣುವುದಕ್ಕಾದರೂ ಎಲ್ಲಾ ಕನ್ನಡಿಗರೂ ಚಿತ್ರ ನೋಡಲು ಆಗಮಿಸುತ್ತಾರೆ ಎಂಬುದು ನಿರೀಕ್ಷೆ. ಒಂದು ರೀತಿಯ ಹಬ್ಬದ ವಾತಾವರಣವನ್ನೇ ಸೃಷ್ಟಿಸಿರುವ ಈ ಚಿತ್ರ, ಇಲ್ಲಿಯೂ ಕೂಡ ದಾಖಲೆ ನಿರ್ಮಿಸಲಿ, ರಣ ಬಿಸಿಲಿಗೆ ಮೈಯೊಡ್ಡಿ ನಿಂತಿರುವ ಎಲ್ಲಾ ಕನ್ನಡಿಗರ ಮೈಮನಗಳನ್ನು ತಣಿಸಲಿ ಎಂಬುದೇ ಎಲ್ಲಾ ಚೆನ್ನೈ ಕನ್ನಡಿಗರ ಆಸೆ, ಆಶಯ.

ಅನಿಸುತಿದೆ ಯಾಕೋ ಇಂದು....ಹಾಡಿಗಾದರೂ ಕುಣಿದು ಕುಣಿದು ಬನ್ನಿ ಗೆಳೆಯ ಗೆಳತಿಯರೇ. ಜೋಗದ ಜಲಪಾತವನ್ನು ನೋಡದವರು, ನೋಡಿರುವವರು ನಮ್ಮ ನಾಡಿನ ಜೋಗದ ಜಲಪಾತ ಇಷ್ಟು ರಮಣೀಯವಾಗಿದೆಯೇ ಎನ್ನುವುದನ್ನು ನೋಡಿ ಕಣ್ಣು ತುಂಬಿಸಿಕೊಳ್ಳಲಿಕ್ಕಾದರೂ ಬನ್ನಿ. ಒಟ್ಟಿನಲ್ಲಿ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ. ಬರುವಾಗ ಬೇರೆ ಭಾಷೆಯ ನಿಮ್ಮ ಗೆಳೆಯ ಗೆಳತಿಯರನ್ನು ಕರೆ ತನ್ನಿ. ಕನ್ನಡದ ಚಿತ್ರಗಳು ಯಾವುದೇ ಭಾಷೆಯವರಿಗೆ ಕಮ್ಮಿ ಇಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡಿ.

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...!

ಹಾಗಂತ ಈಗ ಚೆನ್ನೈನ ಕ್ಯಾಸಿನೊ ಚಿತ್ರಮಂದಿರಕ್ಕೆ ಲ್ಗಗ್ಗೆ ಹಾಕಿಬಿಟ್ಟೀರಾ! ಅಥವಾ ಯಾವನೋ ತಿಕ್ಕಲ ಬರೆದಿರಬೇಕು ಇದನ್ನ ಅಂದುಕೊಂಡ್ರ. ಖಂಡಿತ ಅಲ್ಲ. ಇದು ಸತ್ಯವಾಗಲೂ ನಡೆದದ್ದು. ಯಾವಾಗ ಅಂತೀರಾ? ಆಗಸ್ಟ್ 05,2007 ರಂದು.

ಈಗ್ಯಾಕೆ ಇದನ್ನ ನೆನಸಿಕೊಂಡೆ ಅಂದ್ರೆ, ಎಫ್ಎಂನಲ್ಲಿ 'ಮುಂಗಾರು ಮಳೆ' ಹಾಡು ಕೇಳ್ತಿದ್ದೆ. ಆಗ ಚೆನ್ನೈನಲ್ಲಿ ನಾನು ಕೆಲಸ ಮಾಡ್ತಿದ್ದಾಗ ನಡೆದ ಈ ಅವಿಸ್ಮರಣೀಯ ಘಟನೆ ನೆನಪಾಯ್ತು. ಈ ಸುದ್ದಿಯನ್ನು ನಾನು ಯಾಹೂ!ಕನ್ನಡಕ್ಕಾಗಿ ಬರೆದದ್ದು. ಈಗ ನಿಮಗೋಸ್ಕರ ಹಾಕಿದ್ದೇನೆ ಅಷ್ಟೆ. ಇಷ್ಟವಾದ್ರೆ ಖಂಡಿತ ಬರೆದು ತಿಳಿಸ್ತೀರಲ್ವ?

ಅಂದ ಹಾಗೆ ನಿಮ್ಮಲ್ಲಿ ಯಾರಾದ್ರೂ ಅಂದು ಅಲ್ಲಿಗೆ ಬಂದಿದ್ರಾ?

ಪ್ರತಿಸ್ಪಂದನಗಳು

Re: ಏನು ಚೆನ್ನೈನಲ್ಲಿ ಮುಂಗಾರು ಮಳೆಯೇ?
"ಮುಂಗಾರು ಮಳೆ"ಯ ಸಿಹಿಯನ್ನು ಮತ್ತೊಮ್ಮೆ ನೆನಪಿಸಿದುದಕ್ಕೆ ಧನ್ಯವಾದಗಳು. ಚೆನ್ನೈಯಲ್ಲಿದ್ದು "ಮುಂಗಾರು ಮಳೆ" ನೋಡಿ ಕಣ್ಣೀರು ಸುರಿಸಿ ಕಂಗಾಲಾಗಿ, ಮರುದಿನ ಆಫೀಸ್‌ಗೆ ರಜಾ ಹಾಕಿದ್ದು ನೆನಪಿಗೆ ಬಂತು. ಅಂದರಂತೆಯೇ ನಿಮ್ಮ ಲೇಖನವು ಮತ್ತೊಮ್ಮೆ ಮುಂಗಾರು ಮಳೆಯ ಹನಿ ಸುರಿಸಿದಂತೆ ಮನ ತಂಪಾಗಿಸಿದೆ.
Re: ಏನು ಚೆನ್ನೈನಲ್ಲಿ ಮುಂಗಾರು ಮಳೆಯೇ?
ನಮಸ್ಕಾರ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ನಿಮ್ಮ ಬರಹಗಳನ್ನು ನೋಡಿದೆ. ಸಿಕ್ಕಾಪಟ್ಟೆ ಬರೆದಿದ್ದೀರಿ. ನಿಮಗೆ ಅಷ್ಟು ಸಮಯ ಹೇಗೆ ಸಿಗ್ತದೆ ಅನ್ನೋದೆ ಆಶ್ಚರ್ಯ ನನಗೆ. ಹೀಗೇ ಮುಂದುವರಿಸಿ. ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ಹಕ್ಕು ನಿರಾಕರಣೆ