Welcome, Guest   [ Register | Sign In | Take a tour | Adult Filter: On ]

ಅಯ್ಯೋ! ಕೂದಲು ಉದುರುತ್ತಿದೆ ಏನು ಮಾಡೋದು?

ಸಾಮಾನ್ಯವಾಗಿ ಹೇಳುವುದಾದರೆ, ಕೂದಲುದುರುವಿಕೆಯು ಅಶಕ್ತಿಯಿಂದ, ರಕ್ತಹೀನತೆ, ಟೈಫಾಯಿಡ್ ಖಾಯಿಲೆ ಮುಂತಾದವುಗಳಿಂದ ಉಂಟಾಗಬಹುದು.

ಕೂದಲುದುರುವಿಕೆಯು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವಂತಹದ್ದಾಗಿದ್ದು, ಕೆಲವೊಂದು ವಿಧಾನಗಳನ್ನು ಅನುಸರಿಸುವುದರಿಂದ ಇದನ್ನು ಸರಿಪಡಿಸಿಕೊಳ್ಳಬಹುದು. ಅನುವಂಶೀಯವಾಗಿ ಆಗುವುದನ್ನು ತಡೆಗಟ್ಟೋಕೆ ವೈದ್ಯ ಬ್ರಹ್ಮನ ಕೈಲೂ ಸಾಧ್ಯವಿಲ್ಲ. ಆದರೆ, ಈಗ technology ಅನ್ನೋ ವಿಸ್ಮಯ ಕೃತಕವಾಗಿಯಾದರೂ ಅದನ್ನು ಸಾಧ್ಯವಾಗಿಸಿದೆ. ಸ್ವಾಭಾವಿಕವಾಗಿ ಹೇಗೆ ಕೂದಲನ್ನು ಸ್ವಸ್ಥವಾಗಿರಿಸಿಕೊಳ್ಳಬಹುದು ಅನ್ನೋದನ್ನ ತಿಳಿದುಕೊಳ್ಳಬೇಕು ಅನ್ನೋರಿಗೆ ಈ ನನ್ನ ಟಿಪ್ಸು. ಉಪಯೋಗವಾದ್ರೆ ತಿಳಿಸ್ತೀರಲ್ಲ.

ಪೌಷ್ಟಿಕಾಂಶದ ಕೊರತೆಯಿಂದೇನಾದರೂ ಕೂದಲಿನ ಸಮಸ್ಯೆ ಉಂಟಾದಲ್ಲಿ, ಹಣ್ಣು ಮತ್ತು ತರಕಾರಿಗಳ ನಿರಂತರ ಸೇವನೆಯಿಂದ ಉತ್ತಮ ಫಲಿತಾಂಶವನ್ನು ಕಾಣಬಹುದು.

ಕೂದಲು ಉದುರುವುದನ್ನು ತಡೆಗಟ್ಟಲು ಮೊದಲು ಕೂದಲಿನ ಬೇರುಗಳನ್ನು ಭದ್ರವಾಗಿಸಿಕೊಳ್ಳಬೇಕು. ಹಾಗೆ ಮಾಡಲು, ವಾರಕ್ಕೆ ಕನಿಷ್ಟ 3-4 ಬಾರಿಯಾದರೂ ಕೂದಲಿನ ಬುಡಕ್ಕೆ ಉತ್ತಮ ಕೂದಲೆಣ್ಣೆಯನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. ಸಾಧ್ಯವಾದಷ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಒಳ್ಳೆಯದು.

ಸ್ನಾನವಾದ ಮೇಲೆ ಮೃದು ಬಟ್ಟೆಯಿಂದ ಕೂದಲನ್ನು ಒರೆಸಬೇಕು. ಹಸಿ ಕೂದಲನ್ನು ಬಾಚಬಾರದು. ಆದ್ದರಿಂದ, ಸ್ನಾನವಾದ ಮೇಲೆ ಕೂದಲು ಒಣಗಲು ಬಿಡಬೇಕು. ಅತಿ ಹೆಚ್ಚು ನೊರೆ ಬರುವ ಶಾಂಪೂ ಬಳಸಬಾರದು. ಹರ್ಬಲ್ ಶಾಂಪೂ ಬಳಸಿದಲ್ಲಿ ಉತ್ತಮ ಪರಿಣಾಮವನ್ನು ಕಾಣಬಹುದು.

ಕೂದಲನ್ನು ದಪ್ಪ ಹಲ್ಲಿರುವ ಬಾಚಣಿಕೆಯಿಂದ ಮೃದುವಾಗಿ ಬಾಚಬೇಕು. ಒತ್ತಿ ಬಾಚಿದಷ್ಟು ಕೂದಲು ಹೆಚ್ಚು ಉದುರುವ ಸಾಧ್ಯತೆಯಿರುತ್ತದೆ. ಇವೆಲ್ಲಾ ವಿಧಾನಗಳನ್ನು ತಪ್ಪದೆ ಪಾಲಿಸಿದಲ್ಲಿ, ಸಾಧ್ಯವಾದಷ್ಟು ಮಟ್ಟಿಗೆ ಕೂದಲುದುರುವುದನ್ನು ತಡೆಗಟ್ಟಬಹುದು. ಇವೆಲ್ಲವನ್ನು ಅನುಸರಿಸಿದ ಮೇಲೆಯೂ ಕೂದಲುದುರುವುದು ನಿಲ್ಲದಿದ್ದಲ್ಲಿ, ಉತ್ತಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಹಕ್ಕು ನಿರಾಕರಣೆ